ಪುರುಷ ಗಾನರೀಯ
1000-1040 ಫ್ಯಾ.ವರೆಗೂ ಜ್ವರ ಬರುವುದು, ಆಗಾಗ್ಗೆ ಮೂತ್ರ ವಿಸರ್ಜಿಸುವುದು, ಮೂತ್ರವನ್ನು ವಿಸರ್ಜಿಸುವಾಗ ನೋವು, ಮೂತ್ರ ವಿಸರ್ಜನೆಯ ಅನಂತರ ಮತ್ತೊಮ್ಮೆ ಮೂತ್ರ ಮಾಡಬೇಕೆಂಬ ಇಚ್ಛೆ, ಮೂತ್ರನಾಳದಿಂದ ಕೀವು ಇಲ್ಲವೆ ರಕ್ತಮಿಶ್ರಿತವಾದ (ಹಳದಿ) ಕೀವು ಬೀಳುವುದು, ಮೊದಮೊದಲು ಮೂತ್ರದ ಜೊತೆಯಲ್ಲಿ ಹರಿದುಬರುವ ಕೀವು ಅನಂತರ ಮೂತ್ರನಾಳದಲ್ಲಿ ಯಾವಾಗಲೂ ಸ್ರವಿಸುತ್ತಿರುವುದು, ಶುಕ್ಲಗ್ರಂಥಿಯಲ್ಲಿ ಕೀವು ಸಂಗ್ರಹಗೊಂಡು ಮೂತ್ರ ಹೊರಬಾರದೆ ಹೊಟ್ಟೆನೋವುಂಟಾಗುವುದು - ಇವು ಕೆಲವು ಮುಖ್ಯ ಲಕ್ಷಣಗಳು. ಮೂತ್ರನಾಳದ ಹೊರ ಮತ್ತು ಒಳಭಾಗದಲ್ಲಿ ಗ್ರಂಥಿ ಮತ್ತು ಮೂಲೆಗಳಿದ್ದು ಗಾನರೀಯ ಕ್ರಿಮಿಗಳು ಗೂಡುಕಟ್ಟಿ ಬೆಳೆಯಲು ಅನುಕೂಲವಿರುವುದರಿಂದ ಟೈಸನನ ಗ್ರಂಥಿ, ಲಿಟ್ಟರ್ ಗ್ರಂಥಿ, ಕೌಪರ್ ಗ್ರಂಥಿ, ಶುಕ್ಲ ಗ್ರಂಥಿ ಮತ್ತು ಲ್ಯಾಕುನೇ ಮಾರ್ಗಾನಿಗಳಲ್ಲಿ ಉದ್ರೇಕವಾಗಿ ಗುಳ್ಳೆಗಳೇಳಬಹುದು. ಲಿಟ್ಟರ್ ಗ್ರಂಥಿ ಮತ್ತು ಲ್ಯಾಕುನೇ ಮಾರ್ಗಾನಿಗಳಲ್ಲಿ ಹಲವು ವೇಳೆ ಉರಿಯೂತವುಂಟಾಗಿ ಮೂತ್ರನಾಳವು ಸಂಕುಚಿತವಾಗಿ ಮೂತ್ರವಿಸರ್ಜನೆ ಕುಂಠಿತವಾಗುವುದುಂಟು.  ಎಪಿಡಿಡೈಮಸ್, ವೃಷಣ ನಾಳ ಮತ್ತು ವೀರ್ಯಕೋಶಗಳಲ್ಲಿ ಉರಿಯೂತವಾಗಿ ರೋಗ ತೊಡಕುಗಳುಂಟಾಗಬಹುದು. ಎಪಿಡಿಡೈಮಸ್ ಉಬ್ಬಿ ಅಂಡಕೋಶದಲ್ಲಿ ತೀವ್ರ ನೋವು, ಜ್ವರ ಬರುತ್ತದೆ. ಸ್ಖಲನನಾಳದ ಸುತ್ತ ಬಾವುಂಟಾಗಿ ವೀರ್ಯ ಹೊರಬರಲು ಅಡ್ಡಿಯಾಗಿ ಪುರುಷರಲ್ಲಿ ಅನೇಕ ತೊಂದರೆಗಳಾಗಬಹುದು. ರಕ್ತಚಲನೆಯಿಂದ ಈ ಕ್ರಿಮಿ ದೇಹದ ಬೇರೆ ಬೇರೆ ಅಂಗಗಳಿಗೆ ಸಂಚರಿಸಿ ಕಣ್ಣು ಮತ್ತು ಕೀಲುಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಕಣ್ಣಿನ ಪಾಪೆ ಮತ್ತು ಕನೀನಿಕೆಗಳಲ್ಲಿ ನೋವು, ಹುಣ್ಣು ಮತ್ತು ರಕ್ತಾವರೋಧ ಮುಂತಾದ ತೊಂದರೆಗಳುಂಟಾ ಗುತ್ತವೆ. ಮೊದಲು ದೇಹದ ಎಲ್ಲ ಕೀಲುಗಳಲ್ಲಿ ನೋವುಂಟಾಗಿ ಅನಂತರ ಯಾವುದಾದರೂ ಒಂದು ದೊಡ್ಡ ಕೀಲಿನಲ್ಲಿ ನೋವು ಬಾವುಗಳಾಗುತ್ತವೆ. ಸಾಮಾನ್ಯವಾಗಿ ಮೊಣಕಾಲಿನ ಕೀಲಿನಲ್ಲಿ ಕೀವು ಸಂಗ್ರಹಗೊಂಡು ನಡೆಯಲು ಬಾರದಂತಾಗುತ್ತದೆ. ಕೀಲು ಗಟ್ಟಿಯಾಗಿ ಮಡಚಲಾಗದಂತೆ ಇಲ್ಲವೆ ಮಡಚುವಾಗ ವಿಪರೀತ ನೋವು ಬರುವಂತೆ ಆಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ